ಶಿಕ್ಷಕರಿಗೆ ಸಚಿವ ಮಧು ಬಂಗಾರಪ್ಪ ಗುಡ್ ನ್ಯೂಸ್
ಪದೋನ್ನತಿ, ಒಪಿಎಸ್ ಜಾರಿ ಸೇರಿ ಹಲವು ಬೇಡಿಕೆ ಈಡೇರಿಕೆ ಭರವಸೆ
ಬೆಂಗಳೂರು: ಶಿಕ್ಷಕರ ಬೇಡಿಕೆ ಈಡೇರಿಕೆ ಬಗ್ಗೆ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದು, ಶೀಘ್ರವೇ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕರೆದೊಯ್ಯುವುದಾಗಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ ರಾಜಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸಚಿವರು, ಪದವೀಧರ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಆರು ಮತ್ತು ಎಂಟನೇ ತರಗತಿಗೆ ಪದೋನ್ನತಿ ನೀಡಲು ಸುಗ್ರೀವಾಜ್ಞೆ ಹೊರಡಿಸುವಂತೆ ಬೇಡಿಕೆ ಇಟ್ಟಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ವಿಚಾರ ತರುವುದಾಗಿ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ಬರುವುದರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಹಿಂದೆ ಮುಂದೆ ಆಗಬಹುದು. ಆದರೆ, ವರ್ಗಾವಣೆ ಪ್ರಕ್ರಿಯೆ ನಿಲ್ಲಿಸುವುದಿಲ್ಲ, ವರ್ಗಾವಣೆ ಪ್ರಕ್ರಿಯೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರಿಗೆ ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಇದನ್ನು ಪರಿಗಣಿಸಲಿದ್ದಾರೆ ಎಂದು ಹೇಳಿದ್ದಾರೆ.