ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) ಪರೀಕ್ಷೆ ಜನವರಿ 13 ರ ನಾಳೆ ನಡೆಯಲಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ವಿವಿಧ ರೀತಿಯ 41 ವಿಷಯಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಒಟ್ಟು 1,17,302 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಬೆಂಗಳೂರು, ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ಮೈಸೂರು, ಮಂಡ್ಯ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪರೀಕ್ಷಾ ಕೇಂದ್ರ ತೆರೆದಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಕೆಸೆಟ್ ಪರೀಕ್ಷೆಯು ನಾಳೆ ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಮೊದಲ ಪತ್ರಿಕೆ ಮತ್ತು ಮ.12 ರಿಂದ 2 ಗಂಟೆಯವರೆಗೆ ಎರಡನೇ ಪತ್ರಿಕೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಶಿಸ್ತುಬದ್ದವಾಗಿ ನಡೆಸಬೇಕು, ಅಭ್ಯರ್ಥಿಗಳು ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳು, ಕ್ಯಾಲ್ಕುಲೇಟರ್ಗಳನ್ನು ಕೇಂದ್ರದೊಳಗೆ ತೆಗೆದುಕೊಂಡು ಬರುವಂತಿಲ್ಲ. ಸುಗಮ ಮತ್ತು ಶಾಂತಯುತ ಪರೀಕ್ಷೆ ಮತ್ತು ಪರೀಕ್ಷಾ ಅವ್ಯವಹಾರಗಳನ್ನು ತಡೆಗಟ್ಟಲು ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ  ಜಾರಿಗೊಳಿಸಲಾಗುತ್ತದೆ.