Google News-KN | Google News-EN | Telegram |
ಶತಮಾನದ ಶಾಲೆಯಲ್ಲಿ ವ್ಯವಸ್ಥಿತ ಮೂತ್ರಾಲಯವಿಲ್ಲ!
ಮೂಡಲಗಿ: ಶತಮಾನ ಪೂರೈಸಿರುವ ಮೂಡಲಗಿಯ ಕನ್ನಡ ಬಾಲಕ, ಬಾಲಕಿಯರ ಶಾಲೆಯಲ್ಲಿ ವ್ಯವಸ್ಥಿತ ಮೂತ್ರಾಲಯದ ಕೊರತೆ ಇದೆಯೆಂಬ ಆರೋಪಗಳು ಪಾಲಕರಿಂದ ಬಂದಿದ್ದು ಅಲ್ಲಿಗೆ ಭೇಟಿ ಕೊಟ್ಟ ಪತ್ರಿಕೆಗೂ ಕಂಡು ಬಂದಿದ್ದು ಶಾಲೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.
ನೂರು ವರ್ಷಗಳನ್ನು ಪೂರೈಸಿರುವ, ನಾವು ಕಲಿತ ಶಾಲೆಗೆ ಭೇಟಿ ಕೊಟ್ಟರೆ ಮಧುರ ಕ್ಷಣಗಳ ನೆನಪಾಗಬೇಕು. ಆಗಿನ ಪರಿಸ್ಥಿತಿಗಿಂತಲೂ ಈಗ ಇನ್ನೂ ಉತ್ತಮವಾಗಿ ಶಾಲೆಯು ಹೊರಹೊಮ್ಮಬೇಕಾಗಿತ್ತು. ಆದರೆ ಅಲ್ಲಿನ ಸ್ಥಿತಿ ತೀರ ವಿರುದ್ಧವಾಗಿದೆ.
ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷ್ಯ, ಶಾಲಾ ಸುಧಾರಣೆ ಹಾಗೂ ನಿರ್ವಹಣೆ ಸಮಿತಿಯ ನಿಸ್ತೇಜತನದಿಂದಾಗಿ ಈ ಹಳೆಯ ಶಾಲೆಯ ಕಟ್ಟಡ ತೀರಾ ಶಿಥಿಲಗೊಂಡಿದ್ದು ಒಂದು ಭಾಗದಲ್ಲಿ ಹೆಂಚು ತೆಗೆದು ಈಗಿನ ಕಾಲದ ಸ್ಟೀಲ್ ಪತ್ರಾಸು ಹಾಕಲಾಗಿದೆಯಾದರೂ ಶಾಲಾ ಕೋಣೆಗಳು ತೀರಾ ಅಸ್ವಸ್ಥಗೊಂಡು ಸಲಾಯಿನ್ ಮೇಲೆ ಬದುಕಿವೆಯೇನೋ ಅನಿಸುತ್ತದೆ.
ಹಳೆಯ ಬಾಗಿಲುಗಳು ಕೆಟ್ಟಿವೆ, ನಾವು ನೋಡುತ್ತಿದ್ದ ಗೋಡೆಯ ಚಿತ್ರ ರಾಮಾಯಣ ಅಳಿಸಿ ಹೋಗಿದೆ, ಮಕ್ಕಳು ಕೂರುವ ಜಾಗ ಧೂಳುಮಯವಾಗಿದೆ, ಮುಖ್ಯವಾಗಿ ಬಾಲಕರಿಗೆ ಮೂತ್ರ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ. ಕಟ್ಟಡದ ಹಿಂದೆ ಇಟ್ಟಿರುವ ಪಾಯಖಾನೆಗಳನ್ನು ನೋಡಿದರೇನೆ ಬಂದಿರುವ ಒತ್ತಡ ವಾಪಸು ಹೋಗುತ್ತದೆ ! ಇದೇ ರೀತಿಯ ಗಬ್ಬು ಪರಿಸ್ಥಿತಿ ಬಾಲಕಿಯರ ಶೌಚಾಲಯದಲ್ಲೂ ಇದೆ. ಮೂರು ಕಡೆ ಶೌಚಾಲಯಗಳ ವ್ಯವಸ್ಥೆ ಇದೆ ಆದರೆ ಶೌಚ ಮಾಡಲು ಅರ್ಹವಾಗಿಲ್ಲ ! ಒಳಗೆಲ್ಲ ಜೇಡರಬಲೆ ಕಟ್ಟಿಕೊಂಡಿದೆ ಇದರ ಅರ್ಥ ಶೌಚಾಲಯದ ಬಳಕೆ ಮಾಡಲು ಅಲ್ಲಿ ಯಾರಿಗೂ ಆಗಿಲ್ಲ. ಅಷ್ಟೊಂದು ಗಬ್ಬೆದ್ದು ಹೋಗಿವೆ.
ಈ ಬಗ್ಗೆ ಕೇಳಿದಾಗ ಸದ್ಯದಲ್ಲಿಯೇ ಟೆಂಡರ್ ಕರೆಯಲಿದ್ದಾರೆ ಎಂಬ ಹಾರಿಕೆಯ ಮಾಹಿತಿ ಸಿಕ್ಕಿತು. ಮಕ್ಕಳ ಆರೋಗ್ಯದ ಕತೆಯೇನು ಎಂಬ ಪ್ರಶ್ನೆ ಏಳುತ್ತದೆ.
ಸರಕಾರಿ ಶಾಲೆಗಳ ಇಂಥ ದುಸ್ಥಿತಿಯಿಂದಾಗಿಯೇ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುತ್ತಾರೆ. ಖಾಸಗಿ ಶಾಲೆಗಳೋ ನಿಯಮಗಳನ್ನೇ ಪಾಲನೆ ಮಾಡದೆ ಭ್ರಷ್ಟಾಚಾರ ಮಾಡಿ ಶಾಲೆ ನಡೆಸುತ್ತಾರೆ. ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಗುಲಾಮನಂತೆ ನಡೆದುಕೊಳ್ಳುತ್ತದೆ. ಇವರ ನಡುವೆ ಸರಕಾರಿ ವಿದ್ಯಾರ್ಥಿಗಳು ಸರಿಯಾದ ಸೌಲಭ್ಯವಿಲ್ಲದೆ ಕಲಿಯಬೇಕಾಗುತ್ತದೆ.
ಸರಕಾರ ಶಾಲೆಗಳಿಗೆ ಅನಿಯಮಿತ ಅನುದಾನ ನೀಡುತ್ತದೆ. ಆದರೆ ಅದು ಭ್ರಷ್ಟ ಅಧಿಕಾರಿಗಳ ಕೈಯಲ್ಲಿ ಸಿಕ್ಕರೆ ಸರಿಯಾಗಿ ಬಳಕೆಯಾಗದೆ ದುರುಪಯೋಗ ವಾಗುತ್ತದೆ. ಮಕ್ಕಳಿಗೆ ಸರಿಯಾದ ಶಿಕ್ಷಣದ ಜೊತೆಗೆ ಸೌಲಭ್ಯಗಳೂ ದೊರಕಬೇಕು ಎಂಬುದು ಪಾಲಕರ ಆಶಯ ಇದನ್ನು ಸ್ಥಳೀಯ ಅಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ವಹಿಸಬೇಕು.
ಶಾಲಾ ಸುಧಾರಣಾ ಸಮಿತಿ ಇದೆಯೋ ಇಲ್ಲವೋ ಎಂಬುದನ್ನೂ ನೋಡಬೇಕಾದ ಕರ್ತವ್ಯ ಬಿಇಓ ಅವರದಾಗಿದೆ. ಡಿಡಿಪಿಐ ಮತ್ತು ಶಾಸಕರಾದರೂ ಈ ಬಗ್ಗೆ ಗಮನವಹಿಸುತ್ತ ಇರಬೇಕಿತ್ತು ಆದರೆ ಅವರೆಲ್ಲ ಚುನಾವಣೆಯಲ್ಲಿ ಬಿಸಿಯಾಗಿದ್ದಾರೆ !
ಪಾಲಕರಿಂದ ಶೌಚಾಲಯದ ಬಗ್ಗೆ ದೂರು ಬಂದಾಗ ಕನ್ನಡ ಶಾಲೆಯ ಈ ಬ್ರಹ್ಮಾಂಡ ಅಶೌಚ ಬಯಲಾಯಿತು. ಈ ಬಗ್ಗೆ ಸಾಮಾಜಿಕ ಕಾಳಜಿ ಇರುವ ಮಲ್ಲಪ್ಪ ಮದಗುಣಕಿಯವರು ಹೇಳಿದ್ದಿಷ್ಟು.
ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಇರುವ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಅನುದಾನ ಬರುತ್ತದೆ ಅದರ ಸದುಪಯೋಗವಾಗಬೇಕು. ಶಾಲೆಗೆ ಭೇಟಿ ನೀಡುವ ಪಾಲಕರು, ಅತಿಥಿಗಳಿಗೆ ಸಂತೋಷ ನೀಡುವ ವಾತಾವರಣ ಅಲ್ಲಿ ಇರಬೇಕು. ಬಿಇಓ, ಡಿಡಿಪಿಐ ಹಾಗೂ ಶಾಸಕರು ಸರ್ಕಾರಿ ಶಾಲೆಗಳ ದುಸ್ಥಿತಿಯ ಬಗ್ಗೆ ಗಮನ ಹರಿಸಿ ಅವುಗಳನ್ನು ಸುಧಾರಿಸಬೇಕು. ಈ ರೀತಿ ಸೌಲಭ್ಯ ವಂಚಿತ ಮಾಡುವುದರಿಂದ ಶಿಕ್ಷಣದ ಹಕ್ಕನ್ನು ಕಸಿದುಕೊಂಡಂತಾಗಿತ್ತದೆ. ಇದು ನಿಲ್ಲಬೇಕು. ಶಾಲೆಗಳು ಸುಧಾರಿಸಬೇಕು.
–ಮಲ್ಲಪ್ಪ ಮದಗುಣಕಿ
ವರದಿ: ಉಮೇಶ ಬೆಳಕೂಡ
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.