‘ಸ್ವಾತಂತ್ರ್ಯ ತೊರೆಯ ಅಮೃತ ಧಾರೆ’ ಕೃತಿಯ ಅವಲೋಕನ ಕಾರ್ಯಕ್ರಮ | Azad Times

3 months ago 227
Google News-KN Google News-EN Telegram Facebook

Azad Times News Desk.

ದಿ.31  ರಂದು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಘಟಕ ಮತ್ತು ತನ್ಮಯ ಚಿಂತನ ಚಾವಡಿಯ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ಮಹಾಂತೇಶ ನಗರದ ಮಹೇಶ ಪಿ.ಯು. ಕಾಲೇಜಿನಲ್ಲಿ ಮುಂಜಾನೆ 11 ಘಂಟೆಗೆ ಬೆಳಗಾವಿಯ ಹಿರಿಯ ಸಾಹಿತಿಗಳಾದ ಸ.ರಾ.ಸುಳಕೂಡೆ ಅವರ  ಸಂಪಾದಕತ್ವದಲ್ಲಿ ರಚನೆಗೊಂಡ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನ ಕೃತಿ ” ಸ್ವಾತಂತ್ರ್ಯ ತೊರೆಯ ಅಮೃತ ಧಾರೆ” ಕೃತಿಯ ಲೋಕಾರ್ಪಣೆ ನಡೆಯಿತು.

ನಾಡಗೀತೆಯೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು. ಕೃತಿಯ ಅವಲೋಕನ ಪರವಾದ ಉಪನ್ಯಾಸದಲ್ಲಿ ಶಿಕ್ಷಕಿಯರಾದ ಶ್ರೀಮತಿ ಕಮಲಾ ಗಣಾಚಾರಿ ಮಾತನಾಡುತ್ತ, ಸ್ವಾತಂತ್ರ್ಯ ಪೂರ್ವದ, ಸ್ವಾತಂತ್ರ್ಯ ಸಂದರ್ಭದಲ್ಲಿ, ಸ್ವಾತಂತ್ರ್ಯ ನಂತರದ ಒಟ್ಟು 75 ಪ್ರಖ್ಯಾತ, ಸ್ಮರಣೀಯ  ಹೋರಾಟಗಾರರ ಸಾಧಕರ  ಬದುಕು, ಸಾಧನೆ ಹಾಗೂ ದೇಶ ಸೇವೆಯಲ್ಲಿ ಅವರ ಪಾತ್ರ ಕುರಿತಾಗಿ ಬಹು ಮಾರ್ಮಿಕವಾದ ವಿವರಣೆ ಸೂಳಕೂಡೆಯವರ  ಲೇಖನಗಳ ಸಂಗ್ರಹಿತ  ಕೃತಿಯಲ್ಲಿ ಇರುವದನ್ನು ತಿಳಿಸುತ್ತ,  ಇತಿಹಾಸ ಭವಿಷ್ಯವನ್ನು ಬೆಸೆಯುವ ಕೊಂಡಿಯಾಗಿ ಆ ಕೃತಿಯ ಸಾಧಕರ ಪಾತ್ರವಿದೆ ಎನ್ನುವದನ್ನು ಸ್ಪಷ್ಟಪಡಿಸಿದರು.     

ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಮಹೇಶ್ ಪಿ.ಯು. ಕಾಲೇಜಿನ ಪ್ರಾಚಾರ್ಯರಾದ ಎಮ್. ವಿ.ಭಟ್ ಅವರು ಸಾಹಿತ್ಯ ಸೇವೆ ಜಲಧಾರೆಯಂತಿರದೆ, ಸದ್ದು- ಗದ್ದಲವಿರದ ತೈಲಧಾರೆಯಂತೆ ನಿರಂತರತೆಯನ್ನು ಪ್ರತಿಬಿಂಬಿಸಬೇಕು ಹಾಗೂ ಈ ಕೃತಿಯನ್ನು ಆಸಕ್ತಿಯಿಂದ ಓದಿ ಮುಗಿಸಲು ಸುಮಾರು ಐದು ಘಂಟೆ. ಇಪ್ಪತ್ತು ನಿಮಿಷ ಸಾಕು ಎನ್ನುತ್ತ ಕೃತಿಯ ಕುರಿತಾದ ಮೆಚ್ಚುಗೆಯ ಮಾತುಗಳನ್ನಾಡಿದರು. 

     

ಅಧ್ಯಕ್ಷತೆ ವಹಿಸಿ ಮಾತನಾಡಿದ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ನಿವೃತ್ತ ಪ್ರಾಂಶುಪಾಲ ಮತ್ತು ಹಿರಿಯ ಅನುಭಾವಿ ಸಾಹಿತಿಗಳಾದ ಯು.ಎನ್. ಸಂಗನಾಳಮಠ  ಗುರುಗಳು, ವರಕವಿ ಬೇಂದ್ರೆಯವರ ಜನ್ಮದಿನದಂದೇ ಕೃತಿ ಅವಲೋಕನ ನಡೆಯುತ್ತಿರುವ  ಔಚಿತ್ಯವನ್ನು ಸ್ಮರಿಸುತ್ತ, ಸಾಹಿತ್ಯ  ಅಂತರಂಗದ ಅಭಿವ್ಯಕ್ತಿಯ ಸಾಧನ. ಸ್ವಾತಂತ್ರ್ಯ ಇತಿಹಾಸದ ಅದೆಷ್ಟೊ ಸಂಗತಿಗಳು ಇನ್ನೂ  ಬೆಳಕಿಗೆ ಬರಬೇಕಿದೆ. ಆ ನಿಟ್ಟಿನಲ್ಲಿ ಇನ್ನಷ್ಟು ಕೃತಿಗಳ ರಚನೆಯ ಮೂಲಕ ನೈಜ ಇತಿಹಾಸವನ್ನು ಜನತೆಗೆ  ತಿಳಿಸಬೇಕು ಎಂದು ಹೇಳಿದರು.

ಸಾಹಿತಿಗಳಾದ ಸುಳಕೂಡೆಯವರು ಕೃತಿಯ ಪ್ರಕಾಶಕರಾದ ಬೆಂಗಳೂರಿನ ಸಾಹಿತ್ಯ ಸಾಧನ ಪ್ರಕಾಶಕರನ್ನೊಳಗೊಂಡು ಕೃತಿ ರಚನೆ ಸಂದರ್ಭದಲ್ಲಿ ಪ್ರೋತ್ಸಾಹ, ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಬೆಳಗಾವಿ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಎಮ್. ವೈ.ಮೆಣಸಿನಕಾಯಿ ಗುರುಗಳು ಸ್ವಾಗತಿಸಿದರು. ಸುನೀಲ್ ಸಾಣಿಕೊಪ್ಪ  ಕಾರ್ಯಕ್ರಮ ನಿರೂಪಣೆ ಮಾಡಿದರು. ಕೃತಿಯ ಡಿಟಿಪಿಯ ಜವಾಬ್ದಾರಿ ವಹಿಸಿದ್ದ ವಿಜಯ ಮುಚಳಂಬಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮನಸ್ಸು ಎನ್ನುವ ವೈಚಾರಿಕ ಕೃತಿ ಬರೆದಿದ್ದ ಯುವ ಪ್ರತಿಭೆ ಕುಮಾರ ಸತ್ಯಪ್ಪ ಅಡಕಿಪೂಜಾರ ಎನ್ನುವ ವಿದ್ಯಾರ್ಥಿಯನ್ನು ಗೌರವಿಸಲಾಯಿತು. ಸುಮಾ ಬೇವಿನಕೊಪ್ಪಮಠ, ಸಾವಿತ್ರಿ ಮತ್ತು ಗಾಯತ್ರಿ ರೊಟ್ಟಿ ನಾಡಗೀತೆ ಪ್ರಸ್ತುತಪಡಿಸಿದರು.

ಕಾರ್ಯಕ್ರಮದ ಯಶಸ್ವಿ ನಿರ್ವಹಣೆ ಜವಾಬ್ದಾರಿಯನ್ನು ಕ.ಸಾ.ಪ ಬೆಳಗಾವಿ ತಾಲ್ಲೂಕ ಘಟಕದ ಅಧ್ಯಕ್ಷರಾದ ಸುರೇಶ ಹಂಜಿ ವಹಿಸಿಕೊಂಡಿದ್ದರು. ಚಿನ್ಮಯ ಪ್ರಕಾಶನದ ಅಶೋಕ ಉಳ್ಳಾಗಡ್ಡಿ ಅವರು ವಂದನಾರ್ಪಣೆ ಸಲ್ಲಿಸಿದರು.

ಮಾಧ್ಯಮ ಪ್ರತಿನಿಧಿಯಾದ ವಿನೋದ ಜಗಜಂಪಿ ಉಪಸ್ಥಿತರಿದ್ದರು. ಎಸ್. ಆರ್.ಹಿರೇಮಠ, ಎಸ್. ಎಸ್.ಪಾಟೀಲ್, ಮಲಾಬಾದಿ ಹಿರಿಯರು,ಶ್ರೀಮತಿ ಲೀಲಾವತಿ ರಜಪೂತ, ಆರ್.ಎಸ್.ಚಾಪಗಾವಿ, ಗುರುಸಿದ್ದಯ್ಯಾ ಹಿರೇಮಠ, ಅಕ್ಕಮಹಾದೇವಿ ತೆಗ್ಗಿ ಸೇರಿದಂತೆ  ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಸಹೃದಯ  ಶರಣ ಬಳಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page