Google News-KN | Google News-EN | Telegram |
ಎಲ್ಲ ಸಮಾಜದವರಿಂದ ಬೆಂಬಲ ಘೋಷಣೆ
ಮೂಡಲಗಿ: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಿಚಾರವಾಗಿ ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಕರೆ ನೀಡಿದ ಹಿನ್ನೆಲೆ ಪಂಚಮಸಾಲಿ ಸಮಾಜದ ನೂರಾರು ಜನರು ಹಾಗೂ ತಾಲೂಕಿನ ವಿವಿಧ ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿ ಮೂಡಲಗಿ ಸಮೀಪದ ಗುರ್ಲಾಪೂರ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜದ ಸಂಘಟನೆಯ ಬೆಳಗಾವಿ ಜಿಲ್ಲಾಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ, ಪಂಚಮಸಾಲಿ ಸಮಾಜದ ಮೂಡಲಗಿ ತಾಲೂಕಾಧ್ಯಕ್ಷ ಬಸವರಾಜ ಪಾಟೀಲ ಹಾಗೂ ರಾಜ್ಯ ಪಂಚಮಸಾಲಿ ಮಾಜಿ ಸೈನಿಕರ ಸಂಘಟನೆಯ ಅಧ್ಯಕ್ಷ ಬಾಳೇಶ ಶಿವಾಪೂರ ಮಾತನಾಡಿ, ಸಿಎಂ ಬೊಮ್ಮಾಯಿಯವರು ನಮ್ಮ ನಾಯಕರ ಮುಂದೆ 6 ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ತಾಯಿ ಮೇಲೆ ಆಣೆ ಮಾಡಿ ನಮ್ಮ ಹೋರಾಟ ಹತ್ತಿಕ್ಕಿದರು. ನಮ್ಮ ನಾಯಕರು ಅವರ ಮಾತನ್ನು ನಂಬಿದರು ಆದರೆ 2ಎ ಮೀಸಲಾತಿ ನೀಡುವ ಬದಲು 2ಡಿ ಅಂತ ಕೊಟ್ಟಿದ್ದು ನಮ್ಮ ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲಸಂಗಮ ಶ್ರೀಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಮಾರ್ಚ4ಕ್ಕೆ 50 ದಿನಗಳು ಪೂರೈಸಿದ್ದು, ಸರ್ಕಾರ ಮಾತ್ರ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇದೇ ತಿಂಗಳು ಮಾರ್ಚ 15ರಂದು ಶ್ರೀಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೊ ಆ ನಿರ್ಧಾರಕ್ಕೆ ಇಡೀ ರಾಜ್ಯ ಪಂಚಮಸಾಲಿಗಳು ಬದ್ದರಾಗಿರುತ್ತೇವೆ. ಪಂಚಮಸಾಲಿಗಳಿಗೆ ಬೊಮ್ಮಾಯಿ ಸರ್ಕಾರ ಮಾಡುತ್ತಿರುವ ನವರಂಗಿ ನಾಟಕ ಎಲ್ಲವೂ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಇಡೀ ರಾಜ್ಯದ ಪಂಚಮಸಾಲಿಗಳು ನಾಟಕ ಮಾಡಿತ್ತಿರುವ ಈಗಿನ ಬೊಮ್ಮಾಯಿ ಸರ್ಕಾರ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಉಪ್ಪಾರ ಸಮಾಜ ಮುಖಂಡ ಭೀಮಪ್ಪ ಹಂದಿಗುoದ, ಗಾಣಿಗೇರ ಸಮಾಜದ ಮುಖಂಡ ಮಲ್ಲಪ್ಪ ಮದಗುಣಕಿ, ರಡ್ಡಿ ಸಮಾಜದ ಮುಖಂಡ ಪುಲಿಕೇಶ ಸೋನವಾಲ್ಕರ, ಬಣಜಿಗ ಸಮಾಜದ ಮುಖಂಡ ಈರಣ್ಣ ಕೊಣ್ಣೂರ, ಮಾಳಿ ಸಮಾಜದ ಮುಖಂಡ ಚನ್ನಬಸು ಬಡ್ಡಿ, ಮುಸ್ಲಿಂ ಸಮಾಜದ ಅಜೀಜ ಡಾಂಗೆ, ಪರಿಶಿಷ್ಟ ಸಮಾಜದ ಮುಖಂಡ ಶಿವು ಸಣ್ಣಕ್ಕಿ, ಹಾಲುಮತ ಸಮಾಜದ ಮುಖಂಡ ಲಖನ್ ಸವಸುದ್ದಿ ಮಾತನಾಡಿ, ಪಂಚಮಸಾಲಿಗಳ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡುವುದರ ಜೊತೆಗೆ ನಾವು ಕೂಡಾ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತೇವೆ.
ಈ ಸಂದರ್ಭದಲ್ಲಿ ಪಂಚಮಸಾಲಿ ಮುಖಂಡರಾದ ಸಂಗಮೇಶ ಕೌಜಲಗಿ, ಬಸವಣ್ಣಿ ಮುಗಳಖೋಡ, ಕಲ್ಮೇಶ ಗೋಕಾಕ, ಡಾ. ಕಲ್ಲಪ್ಪ ನಾಗರಾಳ, ಡಿ ಎಸ್ ಗೌಡಿಗೋಡರ, ಮಲ್ಲು ಢವೇಳಶ್ವರ, ಶಿವು ಚಂಡಕಿ, ಸುರೇಶ ಸಕ್ಕರೆಪ್ಪಗೋಳ, ಶಿವನಗೌಡ ಪಾಟೀಲ, ಕೆಂಪ್ಪಣ್ಣ ಮುಧೋಳ, ಹಣಮಂತ ಪಾರ್ಶಿ, ರಾಮಣ್ಣ ಪಾಟೀಲ, ಚನ್ನಗೌಡ ಪಾಟೀಲ, ಶಿವಪ್ಪ ಭುಜನ್ನವರ, ಶ್ರೀಶೈಲ ಜುಟನಟ್ಟಿ, ಶಿವಾನಂದ ಎಡತ್ತಿ, ಶಿವಬಸು ತುಪ್ಪದ, ಸುಭಾಷ ಭಾಗೋಜಿ, ಮಹಾದೇವ ಗೋಕಾಕ, ಪ್ರವೀಣ ಕುರಬಗಟ್ಟಿ, ಉಮೇಶ ಶೆಕ್ಕಿ, ಸಂತೋಷ ಪಟ್ಟಣಶೆಟ್ಟಿ ಹಾಗೂ ವಿವಿಧ ಹಳ್ಳಿಗಳಿಂದ ನೂರಾರು ಪಂಚಮಸಾಲಿಗಳು ಉಪಸ್ಥಿತರಿದ್ದರು.
ಗುರ್ಲಾಪೂರ ಕ್ರಾಸ್ ಬಳಿ ಒಂದು ಗಂಟೆಗಳ ಕಾಲ ನಡೆದ ಪ್ರತಿಭಟನೆಯಲ್ಲಿ 2ಕಿಮೀ ದೂರದಷ್ಟು ವಾಹನಗಳು ನಿಂತು ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಓರ್ವ ಪಿಎಸ್‌ಐ ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.