Google News-KN | Google News-EN | Telegram |
ಬೆಂಗಳೂರು-ಮೈಸೂರು ದಶಪಥ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಕಳೆದ ತಿಂಗಳಲ್ಲಿ 335ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 84ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸೆಪ್ಟೆಂಬರ್‌ನಿಂದ ಹೊಸ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾಗಿದ್ದು ಅಪಘಾತಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಹೆದ್ದಾರಿ ಕಾಮಗಾರಿ ಅಂತಿಮ ಹಂತಕ್ಕೆ ಬಂದ ಡಿಸೆಂಬರ್, ಜನವರಿ ತಿಂಗಳಲ್ಲೇ ಹೆಚ್ಚು ಅಪಘಾತಗಳು ವರದಿಯಾಗಿವೆ.
ಕುಂಬಳಗೋಡಿನಿಂದ ನಿಡಘಟ್ಟವರೆಗಿನ ರಾಮನಗರ ಜಿಲ್ಲೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ 110ಕ್ಕೂ ಹೆಚ್ಚು ಅಪಘಾತ ಸಂಭವಿಸಿವೆ. 41ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಒಟ್ಟು 51 ಕಿ.ಮೀ.ನಷ್ಟು ದಶಪಥ ಹಾದು ಹೋಗುತ್ತದೆ. ಬಿಡದಿ, ರಾಮನಗರ-ಚನ್ನಪಟ್ಟಣ ಬೈಪಾಸ್‌ಗಳಲ್ಲಿ ವಾಹನಗಳ ವೇಗ ಹೆಚ್ಚಿದ್ದು, ಗಂಟೆಗೆ 120-140 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿವೆ. ಇದರೊಟ್ಟಿಗೆ ಸರ್ವೀಸ್ ರಸ್ತೆಗಳಲ್ಲಿಯೂ ವಾಹನ ಓಡಾಟ ಹೆಚ್ಚಿದೆ.
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 225 ಅಪಘಾತ ಸಂಭವಿಸಿದ್ದು, 43 ಮಂದಿ ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲಾ ವ್ಯಾಪ್ತಿಯ ಲಕ್ಷ್ಮೀಪುರ ಗೇಟ್‌ನಿಂದ ಮಣಿಪಾಲ್ ಆಸ್ಪತ್ರೆವರೆಗಿನ 5 ಕಿ.ಮೀ. ಹೆದ್ದಾರಿಯಲ್ಲಿ 6 ತಿಂಗಳಿಂದ 30 ಅಪಘಾತಗಳು ವರದಿಯಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಸಂಭವಿಸಿದ 40 ಅಪಘಾತಗಳಲ್ಲಿ 9 ಮಂದಿ ಮೃತಪಟ್ಟಿದ್ದರೆ, ಜನವರಿಯಲ್ಲಿ 55 ಅಪಘಾತಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಎರಡು ತಿಂಗಳಿಂದ ಈಚೆಗೆ 150ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ವೇಗ ಮಿತಿ ಇಲ್ಲ
ದಶಪಥದಲ್ಲಿ ವಾಹನ ವೇಗಕ್ಕೆ ಮಿತಿ ಇಲ್ಲದಿರುವುದು ಅಪಘಾತಗಳ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಮಿತಿ ಮೀರಿದ ವೇಗದಿಂದ ವಾಹನಗಳ ನಡುವೆ ಅಪಘಾತ ಸಂಭವಿಸುತ್ತಿದ್ದು, ಇದರಿಂದಾಗಿ ಸವಾರರು ಪ್ರಾಣ ಕಳೆದುಕೊಳ್ಳತೊಡಗಿದ್ದಾರೆ.
ಸದ್ಯ ಎಕ್ಸ್‌ಪ್ರೆಸ್ ವೇ ಹಾಗೂ ಬೈಪಾಸ್ ರಸ್ತೆ ನಡುವೆ ಏಳು ಅಡಿ ಎತ್ತರದ ಬೇಲಿ ಇದೆ. ಮಧ್ಯೆ ಆಂಬುಲೆನ್ಸ್, ಅಗ್ನಿಶಾಮಕ ದಳ ಸೇರಿದಂತೆ ತುರ್ತು ಸೇವೆ ವಾಹನಗಳ ಓಡಾಟಕ್ಕೂ ಅವಕಾಶ ನೀಡಿಲ್ಲ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಪರದಾಡುವ ಸ್ಥಿತಿ ಇದೆ.
ಬೈಪಾಸ್ ರಸ್ತೆಗಳಲ್ಲಿ ಸುರಕ್ಷತೆ ಕೊರತೆ ಇದ್ದು, ವೈದ್ಯಕೀಯ ಸೇವೆ ಸಹ ಲಭ್ಯವಿಲ್ಲ. ಹೊಸ ಹೆದ್ದಾರಿಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, ಎಚ್ಚರಿಕಾ ಫಲಕ ಅಳವಡಿಸಿದರೆ ಅಪಘಾತ ಸಂಖ್ಯೆ ತಗ್ಗಬಹುದು ಎನ್ನುವುದು ಸಾರ್ವಜನಿಕರ ಸಲಹೆ ಆಗಿದೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.