ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ ; ಕಾರ್ಮಿಕರ ಸೌಲಭ್ಯಗಳ ಮಾಹಿತಿ ಪ್ರಕಟಿಸಲು ಆಗ್ರಹ | Azad Times

2 weeks ago 2
Google News-KN Google News-EN Telegram Facebook

Azad Times News Desk.

ಮೂಡಲಗಿ: ಮೂಡಲಗಿ ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು 7-8 ಸಾವಿರ ಕಾರ್ಮಿಕರಿದ್ದು, ಕಳೆದ 6 ತಿಂಗಳಿಂದ ಕಾರ್ಮಿಕರ ನಿರೀಕ್ಷಕರಿಲ್ಲದೆ, ಕಾರ್ಮಿಕ ಇಲಾಖೆಯಿಂದ ನೀಡುವ ವಿವಿಧ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ ಎಂದು ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಮೂಡಲಗಿಯ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ ಹೇಳಿದರು.

ಸೋಮವಾರದಂದು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸಮರ್ಥ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ ಮೂಡಲಗಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳಿಗಾಗಿ ಬೃಹತ್ ಪ್ರತಿಭಟನೆ ನಡೆಸಿ ಸಂಸದರಾದ ಈರಣ್ಣ ಕಡಾಡಿ ಹಾಗೂ ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಸುಮಾರು 5-6 ತಿಂಗಳಿಂದ ಕಾರ್ಮಿಕರ ಹೊಸ ಕಾರ್ಡ್ ಹಾಗೂ ಕಾರ್ಡ ನವೀಕರಣ ಆಗುತ್ತಿಲ್ಲ ಎಂದು ದೂರಿದರು.

ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಮಕ್ಕಳ ಮದುವೆಗೆ ದೊರೆಯುವ ಧನಸಹಾಯ ಕಳೆದ 2-3 ವರ್ಷಗಳಿಂದ ಸರಿಯಾಗಿ ವಿತರಣೆಯಾಗುತ್ತಿಲ್ಲ, ಠೇವಣಿ ರಸೀದಿಗಳು ಸರಿಯಾಗಿ ನೀಡುತ್ತಿಲ್ಲ ಹಾಗೂ ಕಟ್ಟಡ ಕಾರ್ಮಿಕರಿಗೆ ಮನೆ ಕಟ್ಟಲು 5 ಲಕ್ಷ ರೂಗಳ ಸಹಾಯ ಧನವನ್ನು ಕಾರ್ಮಿಕ ಕಲ್ಯಾಣ ಮಂಡಳಿಯಿಂದಲೇ ನೀಡಬೇಕು, ಇಲಾಖೆಯಿಂದ ನೀಡುವ ಪ್ರತಿಯೊಂದು ಸೌಲಭ್ಯದ ಬಗ್ಗೆ ಮಾಹಿತಿಯನ್ನು ದಿನಪತ್ರಿಕೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ಪ್ರಕಟಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡರಾದ ಪ್ರಕಾಶ ಮಾದರ ಹಾಗೂ ನಿಂಗಪ್ಪ ಫಿರೋಜಿ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತ ಮಾತನಾಡಿ, ಬಿಸಿಲು ಮಳೆಯನ್ನದೆ ಹಗಲಿರುಳು ದುಡಿಯುವ ಕಾರ್ಮಿಕರಿಗೆ, ಕಾರ್ಮಿಕ ಇಲಾಖೆಯಿಂದ ಸಿಗಬೇಕಾದ ಶೈಕ್ಷಣಿಕ ಧನಸಹಾಯ, ಮದುವೆ ಧನ ಸಹಾಯ, ಜೀವ ವಿಮೆ, ಬಸ್ ಪಾಸ್ ಹೀಗೆ ಇನ್ನೂ ಹಲವಾರು ಸೌಲಭ್ಯಗಳಿಂದ ಕಾರ್ಮಿಕರು ವಂಚಿತರಾಗುತ್ತಿದ್ದಾರೆ. ಈ ಕೂಡಲೇ ಸರ್ಕಾರ ವಿಶೇಷ ಗಮನ ಹರಿಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕೆಂದರು.

ಸುಭಾಸ ಪೂಜೇರಿ ಮಾತನಾಡಿ, ಕಾರ್ಮಿಕ ಇಲಾಖೆಯಿಂದ 10ನೇ ತರಗತಿಯಲ್ಲಿ ಇರುವ ಮಕ್ಕಳಿಗೆ ಲ್ಯಾಪ್ಟಾಪ್ ಗಳನ್ನು ವಿತರಣೆ ಮಾಡುತ್ತಿದ್ದು. 10ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ಗಳನ್ನು ನೀಡದೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ ಗಳನ್ನು ನೀಡಿದ್ದು, ಇನ್ನುಳಿದ ಕಾರ್ಮಿಕರ ಮಕ್ಕಳಿಗೆ ತಾರತಮ್ಯ ಮಾಡಿದ್ದಾರೆ ಎಂದು ದೂರಿದರು.

ರಮೇಶ್ ಉಪ್ಪಾರ ಹಾಗೂ ಈರಪ್ಪ ಢವಳೇಶ್ವರ ಮಾತನಾಡಿ, ಕಾರ್ಮಿಕರಿಗೆ ನೀಡುವ ಗೌಂಡಿ ಕಿಟ್, ಸೆಂಟ್ರಿಂಗ್ ಕಿಟ್, ಪೇಂಟಿಂಗ್ ಕಿಟ್ ಗಳು ಹಾಗೂ ಕಾರ್ಮಿಕ ರ ಮಕ್ಕಳ ಸ್ಕೂಲ್ ಕಿಟ್ ಗಳ ಕುರಿತು ಇಲಾಖೆಯಿಂದ ಸರಿಯಾಗಿ ಮಾಹಿತಿ ನೀಡದೆ, ಹೆಸರಿಗಷ್ಟೇ ಕೆಲವು ಕಾರ್ಮಿಕರಿಗೆ ಮಾತ್ರ ನೀಡುತ್ತಿದ್ದಾರೆ. ಅದರ ಬದಲಾಗಿ ಒಂದು ಕಿಟ್ ಗೆ ತಗಲುವ ಹಣವನ್ನು ನೇರವಾಗಿ ಎಲ್ಲ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಸವರಾಜ್ ಪೋಳ, ಕಾನೂನು ಸಲಹೆಗಾರರಾದ ಲಕ್ಷ್ಮಣ್ ಅಡಿಹುಡಿ, ಮಸ್ತಾನ್ ಶೇಖ, ವಿ ಬಿ ಸೊರಗಾವಿ, ರಾಮಚಂದ್ರ ಗುಡ್ಲಮನಿ, ವಸಂತ ಮೇತ್ರಿ, ಸಂಜು ಮುತ್ತೂರ, ನಾಗೇಶ ಸುಳ್ಳನವರ, ಕಿರಣ, ಸಾನವಾಲೆ, ವಿಠಲ ಗಸ್ತಿ, ಕಾಳಪ್ಪ ಬಡಿಗೇರ, ಪ್ರಮೋದ ಪಾಟೀಲ, ಇಲಿಯಾಸ ಜಮಾದಾರ, ಸುಭಾಸ ಚೌಡಕಿ, ಮಲಿಕ ಸಮದಿ, ಉಮೇಶ ಕಲಾಲ, ರಮೇಶ ಜಂಡೆ ಕುರುಬರ, ಬರಮಪ್ಪ ಬಂಡಿವಡ್ಡರ, ಮಹಾಲಿಂಗ ಬಂಡಿ ವಡ್ಡರ, ಷಣ್ಮುಖ ಹಾದಿಮನಿ ಸೇರಿದಂತೆ ಅನೇಕ ಕಾರ್ಮಿಕರು ಉಪಸ್ಥಿತರಿದ್ದರು.


ಬಿಜೆಪಿ ಸರ್ಕಾರ ಬಂದಾಗಿನಿಂದಲೇ ಅಸಂಘಟಿತರಾಗಿದ್ದ ಕಾರ್ಮಿಕ ಸಂಘಗಳು ಸಂಘಟಿತರಾಗಿದ್ದು ನಾನು ಈ ಸಮಸ್ಯೆಯ ಪರವಾಗಿ ಕಾರ್ಮಿಕ ಆಯುಕ್ತರ ಜೊತೆ ಮಾತನಾಡಿದ್ದು ನಾಳೆಯಿಂದಲೇ ಮೂಡಲಗಿ ಹಾಗೂ ಗೋಕಾಕ ತಾಲೂಕಿಗೆ ಕಾರ್ಮಿಕ ನಿರೀಕ್ಷಕರನ್ನು ನಿಯುಕ್ತಗೊಳಿಸಲಾಗುವುದು.

-ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯರು.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page