Google News-KN | Google News-EN | Telegram |
ಸಿಂದಗಿ: ಹಿಂದುಳಿದ ವರ್ಗಗಳ ಆಯೋಗಗಳಿಗೆ ಸಂವಿಧಾನಾತ್ಮಕ ಅಧಿಕಾರ ಕೊಟ್ಟವರು ಪ್ರದಾನ ನರೇಂದ್ರ ಮೋದೀಜಿಯವರು. ಆಯಾ ಕ್ಷೇತ್ರದಲ್ಲಿ ಪಕ್ಷದ ಸಿದ್ದಾಂತದಲ್ಲಿ ಕಾರ್ಯ ನಿರ್ವಹಿಸಬೇಕು ಮುಂದಿನ 2023ರ ಚುನಾವಣೆಯಲ್ಲಿ ಪ್ರತಿಶತ 99 ರಷ್ಟು ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇಡೀ ದೇಶದಲ್ಲಿ ಒಂದು ರಾಜ್ಯದಲ್ಲಿ ಪ್ರತಿಪಕ್ಷದ ಸ್ಥಾನ ಕಳೆದುಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ಹತಾಶಗೊಂಡು ಸದ್ಯ ನಡೆಯುತ್ತಿರುವ ವಿಮಾನ ನಿಲ್ದಾಣಗಳು ನಮ್ಮ ಅವಧಿಯಲ್ಲಿವೆ ನಾವು ಮಾಡಿದ್ದು ಎಂದು ಜಂಭ ಕೊಚ್ಚಿಕೊಳ್ಳುತ್ತಿವೆ ಹಾಗಿದ್ದರೆ ಅವರ ಅವಧಿಯಲ್ಲಿ ಏಕೆ ಕಾರ್ಯರೂಪಕ್ಕೆ ತರಲಿಲ್ಲ ಎಂದು ಪ್ರಶ್ನಿಸಿದ ಅವರು, ವಿಜಯಪುರದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣಕ್ಕೆ 340 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದೇವೆ ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುತ್ತವೆ ಡಬಲ್ ಇಂಜಿನ್ ಸರಕಾರ ಜನಪರ ಯೋಜನೆಗಳಿಗೆ ಮನ್ನಣೆ ನೀಡುತ್ತಿದೆ ಆದ್ದರಿಂದ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಮ್ಮಿಕೊಂಡ ವಿಜಯ ಸಂಕಲ್ಪ ರಥಯಾತ್ರೆಗೆ ಇಡೀ ರಾಜ್ಯಾದ್ಯಂತ ಯುವಕರ ಪಡೆಯಿಂದ ದೊಡ್ಡ ಪ್ರಮಾಣದ ಬೆಂಬಲ ಸಿಗುತ್ತಿದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೆ ಬರುತ್ತದೆ ಇದನ್ನು ಸಹಿಸಕ್ಕೆ ಆಗದ, ಇಡೀ ದೇಶದಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಅಧೋಗತಿಗೆ ತಲುಪಿ ಕೋಮಾದಲ್ಲಿದ್ದರು ಕೂಡಾ ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ತಿರುಕನ ಕನಸು ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
ಕೋವಿಡ್ ಸಂದರ್ಭದಲ್ಲಿ ದೇಶದ 130 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡಿದ್ದರಿಂಲೇ ನಾವಿಂದು ಉಸಿರಾಡುತ್ತಿದ್ದೇವೆ. ಡಬಲ್ ಇಂಜಿನ್ ಸರ್ಕಾರ ರೈತರಿಗೆ, ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ನೀಡಿದೆ. ಅಲ್ಲದೆ ಕೇಂದ್ರ ಸರಕಾರವು ರಾಷ್ಟ್ರೀಯ ಹೆದ್ದಾರಿ ಸುಧಾರಣೆ, ರೈಲು ಸಂಚಾರ ಸೇರಿದಂತೆ ಅನೇಕ ಮೂಲ ಭೂತ ಸೌಕರ್ಯಗಳನ್ನು ನೀಡುವುದರ ಜೊತೆಗೆ ಬಹುದೊಡ್ಡ ಬದಲಾವಣೆ ತಂದಿದೆ. ರಾಜ್ಯದ ಎರಡನೇ ಹಂತದ ವಿಜಯ ಸಂಕಲ್ಪ ಯಾತ್ರೆಯು 4 ಹಂತದಲ್ಲಿ ಪ್ರಾರಂಭಿಸಲಾಗಿದ್ದು ಬಹುದೊಡ್ಡ ಪ್ರಮಾಣದ ಬೆಂಬಲ ದೊರಕಿದೆ. ಅದರ ಭಾಗವಾಗಿ ವಿಜಯ ಸಂಕಲ್ಪಯಾತ್ರೆ ಇಂದು ಬೃಹತ್ ರೋಡ್ ಶೋ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಗೂ ಮುನ್ನ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಅಕಾಲಿಕವಾಗಿ ನಿಧನರಾಗಿದ್ದಕ್ಕೆ ಸಂತಾಪ ಕೋರಿದರು.
ವಿಜಯ ಸಂಕಲ್ಪ ರಥಯಾತ್ರೆಯು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಪ್ರಾರಂಭವಾಗಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸ್ವಾಮಿ ವಿವೇಕಾನಂದ ವೃತ್ತದವರೆಗೆ ವಿವಿಧ ರಸ್ತೆಯ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಬೃಹತ್ ರೋಡ್ ಶೋ ನಡೆಯಿತು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಶಾಸಕ ರಮೇಶ ಭೂಸನೂರ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಡಿ.ಕುಂಬಾರ, ಗೀತಾ ವಿವೇಕಾನಂದ, ವಿವೇಕಾನಂದ ಡಬ್ಬಿ, ಮಲ್ಲಿಕಾರ್ಜುನ ಜೋಗೂರ, ಅಶೋಕ ಅಲ್ಲಾಪುರ, ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ, ಮಂಡಲ ಅಧ್ಯಕ್ಷ ಈರಣ್ಣಾ ರಾವೂರ, ಮಾಧ್ಯಮ ಪ್ರತಿನಿಧಿ ಶಿವಕುಮಾರ ಬಿರಾದಾರ ಸೇರಿದಂತೆ ಅನೇಕರಿದ್ದರು.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.