Google News-KN | Google News-EN | Telegram |
ಹೊಟ್ಟೆಯಲ್ಲಿನ ಗ್ರಂಥಿಗಳಲ್ಲಿ ಅಧಿಕ ಆಮ್ಲ ಉತ್ಪತ್ತಿಯಾಗುವಾಗ ಅಸಿಡಿಟಿ ಉಂಟಾಗುತ್ತದೆ. ಜಠರಾಮ್ಲದ ಸ್ರಾವವು ಮಾಮೂಲಿಗಿಂತಲೂ ಹೆಚ್ಚಾಗಿದ್ದಾಗ ಸಾಮಾನ್ಯವಾಗಿ ಎದೆ ಉರಿಯುತ್ತದೆ ಇದನ್ನೇ ನಾವು ಅಸಿಡಿಟಿ ಎಂದು ಕರೆಯುತ್ತೇವೆ. ಆಹಾರ ಸೇವನೆಯ ಅಭ್ಯಾಸ ಸರಿಯಾಗಿಲ್ಲದ ವ್ಯಕ್ತಿಯಲ್ಲಿ ಈ ಸಮಸ್ಯೆ ತೀವ್ರ ರೂಪದಲ್ಲಿ ಇರಬಹುದು.
ನಿಮ್ಮ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವು ಹೆಚ್ಚುವುದರಿಂದ ಹೊಟ್ಟೆಯಲ್ಲಿ ಅಸಹನೀಯವಾಗಿ ಉರಿಯುವ ಸಂವೇದನೆ ಉಂಟಾಗಬಹುದು. ಈ ಕಾರಣದಿಂದಾಗಿ ಎದೆ ಉರಿ, ಹೊಟ್ಟೆ ಉಬ್ಬರಿಸುವುದು, ಅಜೀರ್ಣ, ಹೊಟ್ಟೆಯಲ್ಲಿರುವ ಆಹಾರಾಂಶಗಳ ಹಿಮ್ಮುಖ ಹರಿವು ಬಾಯಿಯ ಮೂಲಕ ಹೊರಬರುವುದು, ವಾಕರಿಕೆ ಮತ್ತು ಬಾಯಿ ಹುಳಿ-ಹುಳಿಯಾವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಆನುವಂಶಿಕತೆ, ಆಹಾರ ಕ್ರಮ, ಅಧಿಕ ಮದ್ಯಪಾನ ಮತ್ತು ಅಸಹಜವಾಗಿ ಅಧಿಕ ಆಮ್ಲ ಉತ್ಪತ್ತಿಯಾಗುವುದು ಇತ್ಯಾದಿ ಅನೇಕ ಕಾರಣಗಳಿಂದಾಗಿ ಹೊಟ್ಟೆಯಲ್ಲಿ ಅಧಿಕ ಆಮ್ಲವು ಸಂಗ್ರಹಣೆ ಆಗಬಹುದು. ಈ ರೋಗ ಲಕ್ಷಣಕ್ಕೆ ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ, ಹೊಟ್ಟೆಯಲ್ಲಿನ ಆಮ್ಲದ ಹೆಚ್ಚಳದಿಂದ ಅಲ್ಸರ್ ಆಗಬಹುದು.
ಹೊಟ್ಟೆಯ ಹುಣ್ಣು ಅಥವಾ ಅಲ್ಸರ್ ಸಾಮಾನ್ಯವಾಗಿ ಅನಾರೋಗ್ಯಕರ ಆಹಾರ ಅಭ್ಯಾಸದ ಕಾರಣದಿಂದ ಉಂಟಾಗುತ್ತದೆ. ಹೆಚ್ಚಿನ ಜನರಿಗೆ ಭರ್ಜರಿ ಊಟ ಮಾಡಿದ ನಂತರ ಅಥವಾ ಮಸಾಲೆಭರಿತ ಆಹಾರ ಸೇವಿಸಿದ ನಂತರ ಬಾಯಿಯ ಮೂಲಕ ಆಮ್ಲವು ಹೊರಬರುವ ಅಥವಾ ಹೊಟ್ಟೆಯಲ್ಲಿ ಜಠರಾಮ್ಲವು ಹೆಚ್ಚಾಗುವ ಲಕ್ಷಣವು ಕಾಣಿಸಿಕೊಳ್ಳುತ್ತದೆ.
ಹೊಟ್ಟೆಯ ಆಮ್ಲವನ್ನು ನಿಯಂತ್ರಣಕ್ಕೆ ತರುವಲ್ಲಿ ಆಹಾರವು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಕೆಲವು ಆಹಾರಗಳ ಸೇವನೆಯು ಹೊಟ್ಟೆಯಲ್ಲಿನ ಆಮ್ಲದ ಮಟ್ಟವನ್ನು ನಿಯಂತ್ರಣಕ್ಕೆ ತರುವಲ್ಲಿ ಬಹುಮಟ್ಟಿಗೆ ಸಹಾಯ ಮಾಡುತ್ತವೆ. ಎದೆ ಉರಿ ಅಥವಾ ಹುಳಿತೇಗು ಬರುವ ತೊಂದರೆಯು ಧೂಮಪಾನ ಮಾಡುವವರಲ್ಲಿ, ಗರ್ಭಿಣಿ ಮಹಿಳೆಯರಲ್ಲಿ, ಅತಿಯಾಗಿ ಮದ್ಯಪಾನ ಮಾಡುವವರಲ್ಲಿ, ಬೊಜ್ಜು ದೇಹಿಗಳಲ್ಲಿ ಮತ್ತು 34ರಿಂದ 64 ರ ನಡುವಿನ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚು ಕಂಡು ಬರುತ್ತದೆ.
ಅಸಿಡಿಟಿ ನಿವಾರಣೆಗಾಗಿ ಕೆಲವು ಸಲಹೆಗಳು
ತಂಪು ಪಾನೀಯ ಮತು ಕೆಫೀನ್‌ಯುಕ್ತ ಪಾನೀಯಗಳನ್ನು ಸೇವಿಸಬೇಡಿ.
ಪ್ರತಿದಿನ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಪ್ರತಿದಿನ 10-12 ಗ್ಲಾಸ್‌ನಷ್ಟು ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ವಾಯು ಮತ್ತು ಆಸಿಡಿಟಿಯಂತಹ ರೋಗ ಲಕ್ಷಣಗಳು ನಿಯಂತ್ರಣಕ್ಕೆ ಬರುತ್ತವೆ.
ನೀವು ಅಸಿಡಿಟಿಯಿಂದ ಬಳಲುತ್ತಿದ್ದರೆ ಎಳನೀರು ಕುಡಿಯಿರಿ ಅದು ಅಸಿಡಿಟಿಯನ್ನು ಶಮನಗೊಳಿಸಿ,
ಜೀರ್ಣಾಂಗವ್ಯೂಹವನ್ನು ಶಾಂತಗೊಳಿಸುತ್ತದೆ.
ರಾತ್ರಿಯ ಊಟವನ್ನು ನೀವು ನಿದ್ದೆ ಹೋಗುವುದಕ್ಕೆ 2 ರಿಂದ 3 ಗಂಟೆ ಮೊದಲು ಮುಗಿಸಿಬಿಡಿ.
ಎರಡು ಊಟಗಳ ನಡುವೆ ದೀರ್ಘ ಅಂತರವಿರುವುದು ಅಸಿಡಿಟಿ ಕಾಣಿಸಿಕೊಳ್ಳಲು ಇರುವ ಮತ್ತೂಂದು ಕಾರಣ. ಮಧ್ಯೆ ಮಧ್ಯೆ ಸಣ್ಣ ಸಣ್ಣ ಪ್ರಮಾಣದಲ್ಲಿ ನಿಯುಮಿತವಾಗಿ ಊಟ ಸೇವಿಸಿ.
ಉಪ್ಪಿನಕಾಯಿ, ಮಸಾಲೆ ಚಟ್ನಿ, ವಿನೇಗರ್ ಇತ್ಯಾದಿಗಳನ್ನು ಸೇವಿಸಬೇಡಿ
ಯೋಗ ಅಥವಾ ಇತರ ಒತ್ತಡ- ನಿವಾರಕ ಚಟುವಟಿಕೆಗಳು ಅಸಿಡಿಟಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಬಹಳ ಸಹಕಾರಿ ಆಗಬಹುದು.
ಕರಿದ ಪದಾರ್ಥ, ಕೊಬ್ಬುಯುಕ್ತ ಆಹಾರ, ಹಾಳುಮೂಳು ಆಹಾರ ಮತ್ತು ಚಾಕೊಲೇಟ್‌ಗಳನ್ನು ಸೇವಿಸಬಾರದು.
ಕಾರ್ಬೋ ಹೈಡ್ರೇಟ್ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಸೇವಿಸಿ – ಉದಾ: ಅನ್ನ – ಇಂತಹ ಆಹಾರಗಳಲ್ಲಿ ಆಮ್ಲವು ಬಹಳ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತದೆ.
ಮನೆಯಲ್ಲೆ ತಯಾರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿ ಮತ್ತು ಹೊರಗಡೆ ಆಹಾರ ಸೇವಿಸುವುದನ್ನು ತಪ್ಪಿಸಿಕೊಳ್ಳಿ.
ಸಿಗರೇಟು, ಆಲ್ಕೋಹಾಲ್ ಮತ್ತು ಗ್ಯಾಸ್ ತುಂಬಿಸಿರುವ ಪಾನೀಯಗಳನ್ನು ದೂರ ಇಡಿ.
ಅಸಿಡಿಟಿ ನಿವಾರಣೆಗೆ ಅತ್ಯುತಮ ಆಹಾರಗಳು
ತುಳಸಿ
ತುಳಸಿಯು ನಿಮ್ಮ ಹೊಟ್ಟೆಯಲ್ಲಿ ಹೆಚ್ಚು ಲೋಳೆಯನ್ನು ಉತ್ಪತ್ತಿ ಮಾಡಲು ಪ್ರಚೋದನೆ ನೀಡುತ್ತದೆ. ಈ ಲೋಳೆಗೆ ಅಲ್ಸರ್ ನಿರೋಧಕ ಗುಣ ಲಕ್ಷಣ ಇದ್ದು ಇದು ಜಠರಾಮ್ಲದ ಪರಿಣಾಮವನ್ನು ತಗ್ಗಿಸುತ್ತದೆ.
ಶುಂಠಿ
ಈ ಬೇರು ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ ಮತ್ತು ಅವಶ್ಯಕ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ಹೊಟ್ಟೆಯಲ್ಲಿ ಲೋಳೆಯ ಅಂಶವನ್ನು ಹೆಚ್ಚು ಸ್ರವಿಸುವಂತೆ ಮಾಡುತ್ತದೆ ಮತ್ತು ನಿಮ್ಮ ಹೊಟ್ಟೆಯಲ್ಲಿ ಆಮ್ಲದ ಪರಿಣಾಮವನ್ನು ತಗ್ಗುವಂತೆ ಮಾಡುತ್ತದೆ.
ಬೀಜಗಳು
ಬಾದಾಮಿ, ಒಣ ಅಂಜೂರ ಮತ್ತು ಒಣ ದ್ರಾಕ್ಷಿಗಳು ಹೊಟ್ಟೆಯಲ್ಲಿನ ಉರಿಯುವ ಸಂವೇದನೆಯನ್ನು ತಗ್ಗಿಸಲು ಸಹಾಯ ಮಾಡುತ್ತವೆ.
ಬಾಳೆಹಣ್ಣು
ಬಾಳೆಹಣ್ಣುಗಳು ಪೊಟ್ಯಾಷಿಯಂನ ಅತ್ಯುತ್ತಮ ಮೂಲವಾಗಿದ್ದು ಇವು ನಿಮ್ಮ ಹೊಟ್ಟೆಯಲ್ಲಿನ ಆಮ್ಲದ ಉತ್ಪತ್ತಿಯನ್ನು ಸರಿಯಾದ ಮಟ್ಟದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತವೆ. ಬಾಳೆ ಹಣ್ಣಿನಲ್ಲಿ ನಾರಿನ ಅಂಶವು ಅಧಿಕ ಪ್ರಮಾಣದಲ್ಲಿರುತ್ತದೆ, ಇದು ಜೀರ್ಣಶಕ್ತಿಯನ್ನು ಹೆಚ್ಚಿಸಲು ಮತ್ತು ಆಸಿಡಿಟಿ ಮರುಕಳಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ.
ನೆಲ್ಲಿಕಾಯಿ
ಇದರಲ್ಲಿ ವಿಟಾಮಿನ್ ಸಿ ವಿಶೇಷ ಪ್ರಮಾಣದಲ್ಲಿದೆ. ಇದು ಹಾನಿಗೊಳಗಾದ ಹೊಟ್ಟೆಯ ಪದರ ಮತ್ತು ಮತ್ತು ಅನ್ನನಾಳಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಮೊಟ್ಟೆಯ ಬಿಳಿ ಭಾಗ
ಮೊಟ್ಟೆ ಪ್ರೋಟೀನಿನ ಅತ್ಯುತ್ತಮ ಮೂಲ ಮತ್ತು ಅದರಲ್ಲಿ ಆಮ್ಲದ ಅಂಶ ಇರುವುದು ಬಹಳ ಕಡಿಮೆ. ಆದರೆ ಮೊಟ್ಟೆ ಸೇವಿಸುವಾಗ ಅದರ ಹಳದಿಯನ್ನು ಸೇವಿಸಬೇಡಿ ಯಾಕೆಂದರೆ ಇದು ಆಸಿಡಿಟಿಯ ರೋಗಲಕ್ಷಣಗಳನ್ನು ಉಂಟು ಮಾಡುವ ಸಾಧ್ಯತೆ ಇದೆ.
ಜೀರಿಗೆ
ಜೀರಿಗೆಗೆ ಲಾಲಾರಸವನ್ನು ಉತ್ಪತ್ತಿ ಮಾಡುವ ಲಕ್ಷಣವಿದ್ದು, ಇದು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ ಮತ್ತು ವಾಯು ಹಾಗೂ ಇನ್ನಿತರ ಗ್ಯಾಸ್ಟ್ರಿಕ್ ತೊಂದರೆಗಳನ್ನು ಉಪಶಮಗೊಳಿಸುತ್ತದೆ.
ಪುದೀನಾ ಸೊಪ್ಪು
ಪುದೀನಾವು ಹೊಟ್ಟೆಯ ಆಮ್ಲದ ಪ್ರಮಾಣವನ್ನು ತಗ್ಗಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಶೀತಲಕಾರಿ ಗುಣವು ಅಸಿಡಿಯ ನೋವು ಮತ್ತು ಉರಿಯುವಿಕೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.
ಲವಂಗ
ಲವಂಗವನ್ನು ಜಗಿದಾಗ ಅದರ ತೀಕ್ಷ್ಣ ರುಚಿಗೆ ನಿಮ್ಮ ಸ್ವಾದ ಗ್ರಂಥಿಗಳು ಎಚ್ಚೆತ್ತುಕೊಳ್ಳುತ್ತವೆ ಮತ್ತು ಅಧಿಕ ಲಾಲಾರಸವನ್ನು ಉತ್ಪತ್ತಿ ಮಾಡುತ್ತವೆ, ಇದರ ಪರಿಣಾಮವಾಗಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಆಸಿಡಿಟಿಯ ಲಕ್ಷಣಗಳು ನಿಯಂತ್ರಣಕ್ಕೆ ಬರುತ್ತವೆ.
ತಣ್ಣಗಿನ ಹಾಲು
ಹಾಲಿನಲ್ಲಿ ಕ್ಯಾಲ್ಸಿಯಂ ವಿಶೇಷ ಪ್ರಮಾಣದಲ್ಲಿದ್ದು ಅದು ಆಮ್ಲದ ಹೆಚ್ಚಳವನ್ನು ತಡೆಯುತ್ತದೆ ಮತ್ತು ಉತ್ಪತ್ತಿಯಾದ ಹೆಚ್ಚುವರಿ ಆಮ್ಲವನ್ನು ಹೀರಿಕೊಳ್ಳುತ್ತದೆ ಆ ಮೂಲಕ ಆಸಿಡಿಟಿಯ ಲಕ್ಷಣಗಳನ್ನು ತಗ್ಗಿಸುತ್ತದೆ. ತಣ್ಣಗಿನ ಹಾಲು ಕುಡಿಯುವುದರಿಂದ ಅಸಿಡಿಟಿಯ ಬಹುಮುಖ್ಯ ರೋಗಲಕ್ಷಣವಾಗಿರುವ ಎದೆ ಉರಿಯುವಿಕೆಯು ತತ್‌ಕ್ಷಣ ನಿಲ್ಲುತ್ತದೆ.
ಬೆಲ್ಲ
ನಿಮ್ಮ ಬಾಯಿಯಲ್ಲಿ ಬೆಲ್ಲದ ಸಣ್ಣ ತುಂಡನ್ನು ಇರಿಸಿಕೊಳ್ಳಿ ಮತ್ತು ಅದನ್ನು ನಿಧಾನವಾಗಿ ಚೀಪುತ್ತಾ ಇರಿ. ಬೆಲ್ಲದ ಸಿಹಿ ರಸವು ಅಸಿಡಿಟಿಯನ್ನು ಸಂಪೂರ್ಣವಾಗಿ ಮರೆಮಾಡುತ್ತದೆ.
ಏಲಕ್ಕಿ
ಏಲಕ್ಕಿಯು ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ ಮತ್ತು ಹೊಟ್ಟೆಯ ಸೆಡೆತವನ್ನು ಉಪಶಮನಗೊಳಿಸುತ್ತದೆ. ಮಾತ್ರವಲ್ಲದೆ ಇದು ಹೊಟ್ಟೆಯ ಒಳಪದರವನ್ನು ಶಮನಗೊಳಿಸಿ ಅಧಿಕ ಆಮ್ಲವು ಉತ್ಪತ್ತಿಯಾದ ಪರಿಣಾಮವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಸರಳ ಮತ್ತು ಆರೋಗ್ಯಕರ ಜೀವನಶೈಲಿಯು ನಿಮ್ಮನ್ನು ಮತ್ತು ನಿಮ್ಮ ಹೊಟ್ಟೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ. ನಿಮ್ಮ ದಿನನಿತ್ಯದ ಬದುಕಲ್ಲಿ ಸಣ್ಣ ಸಣ್ಣ ಬದಲಾವಣೆಯನ್ನು ಮಾಡಿಕೊಳ್ಳುವ ಮೂಲಕ ನೀವು ಜೀವನಪರ್ಯಂತ ಆರೊಗ್ಯಕರವಾಗಿ ಇರಬಹುದು. ಆಮ್ಲದ ಹುಳಿ-ಹುಳಿ ಇಲ್ಲದ ಸಹಜ ಸುಂದರ ಜೀವನ ನಿಮ್ಮದಾಗಿಸಿಕೊಳ್ಳಿ!!
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.